Saturday, July 11, 2009

ಹೀಗಲ್ಲ-೫

ನನಗೆ ಇದಾಗಬಾರದಿತ್ತು ಎಂದು ಈಗಲೂ ಆಗುತ್ತಿದೆ.ಆದರೇನು ಮಾಡೋದು ಆಗಿಯೇ ಹೋಯಿತು.
ಮನಸ್ಸಲ್ಲಿ ಆ ನೋವು ಇನ್ನೂ ಹಸಿಹಸಿ.ಬಹುಶಃ ಬಹಳ ಕಾಲ ಇದು ಕಾಡಬಹುದೇನೋ..
ಇದು ನನಗೆ ಹೊಸದು.ಅಮೇರಿಕೆಯಲ್ಲಿದ್ದಾಗ ಇಂಥದ್ದೆಲ್ಲಾ ನಾನು ಅನುಭವಿಸಿದವಳಲ್ಲ.ಹಾಗೆಂದು ಭಾರತಕ್ಕೆ ಬಂದ ಕಾರಣ ಹೀಗಾಯಿತೆಂದು ದುಃಖಿಸುವುದೂ ಇಲ್ಲ.
ಆದದ್ದು ಇಷ್ಟು.
ನನ್ನ ಪುಟ್ಟ ಕಾರನ್ನು ಓಡಿಸಿಕೊಂಡು ಆ ಹಳ್ಳಿಯಲ್ಲಿ ಹೋಗುತ್ತಿದ್ದೆ. ಸುಮಾರು ಮೂರು ಗಂಟೆ ಕಳೆದಿರಬೇಕು.ಸಣ್ಣ ಮಳೆ ಆಗಷ್ಟೇ ಬಂದು ಹೋಗಿತ್ತು.ನಾನು ಯಾರನ್ನೋ ಭೇಟಿ ಮಾಡುವುದಕ್ಕೆ ಇತ್ತು.ಮಧ್ಯಾಹ್ನ ನನ್ನ ಗೆಳೆಯ ಆದರ್ಶನ ಮದುವೆ ಊಟ ಮಾಡಿದವಳೇ ಸೀದಾ ಹೊರಟಿದ್ದೆ.ಅವನೋ ತಾನು ಮೂರೂಮುಕ್ಕಾಲು ವರ್ಷ ಪ್ರೀತಿಸಿದ್ದ ಹುಡುಗಿಯನ್ನು ಮದುವೆಯಾದ ಖುಷಿಯಲ್ಲಿ ಓಲಾಡುತ್ತಿದ್ದ.ಚೆಂದದ ಹುಡುಗ.ಮನೆ ಮನೆ ಪೇಪರ್, ಹಾಲು ಹಾಕಿ ಕೆಲಕಾಲ ಕೇಟರಿಂಗ್‌ನಲ್ಲಿ ಕೆಲಸದಾಳಾಗಿ ದುಡಿದು ಇಂಜಿನೀರಿಂಗ್ ಓದಿ ಆಮೇಲೆ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.ಶ್ರೀಮಂತ ಕುಟುಂಬದ ಹುಡುಗಿ ಅವನಿಗೆ ಮನಸೋತು ಬಂದಿದ್ದಳು.ಅವಳು ಅವನ ಬಾಲ್ಯ ಸ್ನೇಹಿತೆ.ಅವನ ಎಲ್ಲಾ ಕಷ್ಟ ನಷ್ಟಗಳನ್ನು ಕಾಣುತ್ತಾ ಕಾಣುತ್ತಾ ಅವನನ್ನು ಹೆಚ್ಚುಹೆಚ್ಚಾಗಿ ಪ್ರೀತಿಸುತ್ತಾ ವರಿಸಿಕೊಂಡಳು.
ಆ ಇಬ್ಬರಿಗೂ ಶುಭ ಹೇಳಿ ಹೋಳಿಗೆ ಊಟ ಮುಗಿಸಿ ಹೊರಟಿದ್ದೆ.
ಆ ಇಳಿಜಾರಿನಲ್ಲಿ ಅದೆಲ್ಲಿ ಇತ್ತೋ ಒಂದು ಸರೀಸೃಪ.ಥಟ್‌ಅಂತ ಅಡ್ಡಾದಿಅಡ್ಡ ಬಂದೇ ಬಂತು.ಬ್ರೇಕ್ ಹೊಡೆದೆ.ಕಾರು ನಿಂತಿತು.ಅಡಿಯಲ್ಲಿ ಆ ಸರೀಸೃಪ ಸಿಕ್ಕಿಹಾಕಿಕೊಂಡಿದೆ ಎಂದು ಖಚಿತವಾಗಿತ್ತು.ಹಿಂದಕ್ಕೆ ಕೊಂಚ ಸರಿಸಿದೆ.ನೋಡುತ್ತೇನೆ ಅಚ್ಚ ಹಳದಿ ಬಣ್ಣದ ನಾಗರಹಾವು.
ಅದರ ಬಾಲ ಸೀಳಿ ಹೋಗಿತ್ತು.ಆ ಜೀವ ಒದ್ದಾಡುತ್ತಾ ಒದ್ದಾಡುತ್ತಾ ಬಂದ ದಾರಿಯಲ್ಲೇ ತಿರುತಿರುಗಿ ನರಳಿಕೊಂಡು ಕೆಳಗೆ ಕಾಡಲ್ಲಿಳಿದು ಕಾಣೆಯಾಯಿತು.
ಅರೆ ಕ್ಷಣದಲ್ಲಿ ನನಗೆ ಅಳುವೇ ಬಂದು ಬಿಟ್ಟಿತು.ಜೋರಾಗಿ ಅತ್ತೆ. ಆ ಬಡಪಾಯಿ ನಾಗರನ ಆ ಕ್ಷಣದ ನೋವು ನನ್ನದೇ ಆಗಿತ್ತು.
ನನ್ನ ತಪ್ಪೇನಿರಲಿಲ್ಲ. ಅದರದ್ದೂ ತಪ್ಪಿಲ್ಲ.ಇಬ್ಬರ ಪಾಡಿಗೆ ಇಬ್ಬರಿದ್ದಾಗ ಎಂಥಾ ಅನಾಹುತ ಆಗಿಬಿಟ್ಟತು ಎಂದು ಹಳಹಳಿಸಿದೆ.
ಇದನ್ನು ಸಂಘಟಿಸುವವರು ಯಾರು ಎಂದು ನನ್ನಲ್ಲೇ ಕೇಳಿಕೊಂಡೆ.ಉತ್ತರ ಸಿಗಲಿಲ್ಲ.
ಮನೆಗೆ ಬಂದಾಗ ಅಮ್ಮ ನಾಗದೋಷದ ಬಗ್ಗೆ ಹೇಳಿದಳು.ಸುಬ್ರಹ್ಮಣ್ಯ ದೇವರಿಗೆ ಇದೆಲ್ಲಾ ಅರ್ಥವಾಗುತ್ತದೆ ಎಂದು ಹಾಸಿಗೆಯಲ್ಲಿ ಮುರುಟಿ ಮಲಗಿದೆ.
ರಾತ್ರಿಯಿಡೀ ಆ ಜೀವ ಪಟ್ಟ ಸಂಕಟ ನನ್ನನ್ನು ಹಿಂಡುತ್ತಿತ್ತು..

No comments:

Post a Comment