Friday, July 10, 2009

ಹೀಗಲ್ಲ-೪

ಮೈಕಲ್ ಜಾಕ್ಸನ್‌ನ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಮಾತಾಡ್ತಾರೇನೋ ಅಂತ ಅನ್ನಿಸುತ್ತಿದೆ.
ಮೀಡಿಯಾಗಳ ಕಾಟ ಅತಿಯಾಯಿತು ಅಂತ ಆಗೋದೇ ಇಂಥಾ ಸಂದರ್ಭದಲ್ಲೇ..ಅವನು ಪಾಪ್ ಗಾಯಕ.ಅಷ್ಟೇ ಆಗಿದ್ದರೆ ಸರಿಯೆನಬಹುದಿತ್ತು.ಪಾಪಿ ಕೂಡಾ.
ದೊಡ್ಡವರೆಲ್ಲಾ ಹೀಗೆ ಇರುತ್ತಾರೇನೋ ಗೊತ್ತಿಲ್ಲ.
ಅನೇಕಬಾರಿ ಪಾಪಿಗಳನ್ನು ನಾವು ಆರಾಧಿಸುತ್ತೇವೆ.ತಪ್ಪೇನಲ್ಲ.ಪಾಪಿ ಕೂಡಾ ತನ್ನ ಪಾಪಗಳ ಬಗ್ಗೆ ಪಶ್ಚಾತಾಪಪಟ್ಟಾಗಲೇ ಅವನು ಪಾಪಿಯಾಗುತ್ತಾನೆ.ಪಾಪಿ ಆಗದೇ ಇರೋದು ಹೇಗೆ ಅಂದರೆ ಮಾಡಿದ ಪಾಪಗಳ ಬಗ್ಗೆ ಕೊಂಚವೂ ಯೋಚಿಸದಿರೋದು.
ಕೆಥರ್‌ಸಿಸ್ ಅಂತಾರೆ.ಭಾವಶುದ್ಧೀಕರಣ.ಪಾಪ ಪ್ರಜ್ಞೆಯಿಂದ ದೂರ ಸರಿಯುವ ಪ್ರಕ್ರಿಯೆ ಅದು.ಪ್ರತೀನಿತ್ಯವೂ ಅಂಥದ್ದು ನಮ್ಮೊಳಗೆ ಆಗುತ್ತಲೇ ಇರುತ್ತದೆ.
ತಿಂಗಳ ಹಿಂದೆ ನಾನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮುಂಬೈಗೆ ಹೋಗುವ ಸಿದ್ಧತೆಯಲ್ಲಿದ್ದೆ.ಅಲ್ಲಿದ್ದ ಉಚಿತ ಫೋನ್‌ನಿಂದ ಅಮ್ಮನಿಗೆ ಮಾತನಾಡಿ ಯಾವುದೋ ಥ್ರಿಲ್ ಪಡೆದುಕೊಂಡು ಕುಳಿತಿದ್ದೆ.ಅಮೇರಿಕೆಯ ವಿಮಾನನಿಲ್ದಾಣಗಳನ್ನು ನೋಡಿ ನೋಡಿ ಸುಸ್ತಾದವಳಿಗೆ ಈ ನಿಲ್ದಾಣ ಯಾವುದೋ ರಿಕ್ಷಾಸ್ಟಾಂಡ್ ಥರ ಕಾಣಿಸುತ್ತಿತ್ತು.
ನನ್ನೆದುರಿಗೆ ಇಬ್ಬರು ಮುದುಕರು ಕುಳಿತಿದ್ದರು.ಅವರಲ್ಲಿ ಓರ್ವ ಮಾಜಿ ಸಚಿವ.ಹಾಗಂತ ಆತ ಪಕ್ಕದವನ ಜೊತೆ ಮಾತನಾಡುತ್ತಿದ್ದಾಗ ನನಗೆ ಅರ್ಥವಾಯಿತು.ಮಾಜಿ ಸಚಿವ ಯಾವ ಘನಂದಾರಿ ವಿಚಾರವನ್ನೂ ಮಾತನಾಡುತ್ತಿರಲಿಲ್ಲ.ಬದಲಾಗಿ ತನಗೆ ಕಳೆದ ರಾತ್ರಿ ನಿದ್ದೆಯೇ ಹತ್ತಲಿಲ್ಲ ಎಂದು ಪಕ್ಕದವನ ಜೊತೆ ಗೋಳಿಡುತ್ತಿದ್ದ.ಸಚಿವನಾಗಿದ್ದಾಗ ಎಷ್ಟೋ ರಾತ್ರಿ ನಿದ್ದೆ ಬರುತ್ತಿರಲಿಲ್ಲ.ಆದರೆ ಅದನ್ನೆಲ್ಲಾ ಕರಗಿಸಿಕೊಳ್ಳೋ ತಾಖತ್ತು ತನಗಿತ್ತು ಎಂದ.ಈಗ ಮಾತ್ರಾ ಒಂದು ರಾತ್ರಿಯನ್ನೂ ನಿದ್ದೆ ಇಲ್ಲದೇ ಕಳೆಯಲು ಸಾಧ್ಯವಾಗುತ್ತಿಲ್ಲ..ಭಯವಾಗುತ್ತದೆ.ಏನಿಲ್ಲಾ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಂತೆ ಏನೋ ಇದೆ ಎಂಬ ಭಯ ಬಂದು ಅಮುಕುತ್ತದೆ ಎಂದು ಹೇಳುತ್ತಿದ್ದ.
ನಾನು ಆ ಮಾಜಿ ಸಚಿವನ ಮುಖವನ್ನೇ ನೋಡಿದೆ.ಅವನಲ್ಲಿ ವಿಷಣ್ಣಛಾಯೆ ಇತ್ತು.ಆರ್ತನಾದ ಎದ್ದು ಕಾಣುತ್ತಿತ್ತು.
ಪಾಪಿ ಚಿರಾಯು ಅಂತ ಹೇಳಿಕೊಂಡೆ.
ಅವನಿಗೆ ನಿದ್ದೆ ಇಲ್ಲದ ಆ ರಾತ್ರಿಯಲ್ಲಿ ನಾನು ನನ್ನ ದಿಂಬನ್ನು ತೊಡೆಸಂದಿಗೆ ಸಿಕ್ಕಿಸಿಕೊಂಡು ಕವುಚಿ ಮಲಗಿ ಸುಖನಿದ್ದೆಯಲ್ಲಿ ಮುಳಗೆದ್ದುದನ್ನು ನೆನೆಸಿ ಸಖತ್ ರೋಮಾಂಚನಗೊಂಡೆ.

No comments:

Post a Comment